Wednesday, May 4, 2011

ಇನಿಯ

ನಿನ್ನ ಅಂತರಾಳ ಅರಿವ ತವಕ ನನ್ನದು 
ನಿನ್ನ ಪ್ರೀತಿಯ ಮಳೆಯಲಿ ನೆನೆವ ತವಕ ನನ್ನದು 
ನಿನ್ನವಳೆಂಬ ಅಧಿಕಾರದ ಮತ್ತು ಆವರಿಸಿದೆ ನನ್ನಲಿ 
ಈ ಮತ್ತನು ಇಳಿಸದ ಸಹನೆ ಇಲ್ಲದಾಗಿದೆ ನನ್ನಲಿ 

ನಿನ್ನ ದುಃಖದಲಿ ಭಾಗಿಯಾಗುವ ತವಕ ನನ್ನದು 
ನಿನ್ನ ಸಂತಸದಲಿ ಸುಖಿಸುವ ಬಯಕೆ ನನ್ನದು
ನಿನ್ನಲ್ಲಿ ಒಂದಾಗಿ, ಲೋಕ ಮರೆವ ಆಸೆ ನನ್ನಲಿ 
ಈ ಆಸೆಗೆ ಸಹನೆಯ ಲಗಾಮು ಇಲ್ಲದಾಗಿದೆ ನನ್ನಲಿ

ಪ್ರೀತಿ ಕೊಡುವದ ನಾ ಬಲ್ಲೆ ಇನಿಯ 
ನಿನಗನಿಸುವ ,ನಿನಗಿಷ್ಟವಿರುವ ರೀತಿ ಯಾವುದು ನಾನರಿಯೆ 
ಬಿಚ್ಚಿಟಿರುವೆ ನನ್ನ ಮನಸ್ಸಿನ ಭಾವನೆ ಇಲ್ಲಿ ,
ತಪ್ಪಿದ್ದಲ್ಲಿ ಕ್ಷಮೆ ಇರಲಿ 
ನಿನ್ನ ಹೃದಯದಲ್ಲಿ ಚಿರಕಾಲ ನಾನೇ ಇರಲಿ 
--ಭಾವನಾ

ದುಃಖದೆಡೆಯ ದೃಷ್ಟಿಕೋನ


ದುಃಖವೆಂಬುದು ಇಲ್ಲದೆ ಹೋಗಿದ್ದರೆ,ಸಂತೋಷಕ್ಕೆ ಎಲ್ಲಿರುತಿತ್ತು ಬೆಲೆ ?
ಕಂಡುಕೊಳ್ಳುತ್ತಿದ್ದೇವೆ? ನಾವು ದೇವರಲ್ಲಿ ನೆಲೆ ?
ಇರುತ್ತಿತ್ತೆ? ಪಶ್ಚಾತಾಪ,ಕೃತಜ್ಞತೆಯ ಸೆಲೆ ?
ಹೆಣೆಯಲಾಗುತ್ತಿತ್ತೆ ? ಆತ್ಮಾವಲೋಕನದ ಬಲೆ?

ದುಃಖವಿರಬೇಕು,ಸಂತಸದ ಮಹತ್ವವವನರಿಯಲು
ದುಃಖವಿರಬೇಕು,ಭಾವನೆಗಳೊಡನೆ ಸರಸವಾಡಲು
ದುಃಖವಿರಬೇಕು, ನಮ್ಮನ್ನು ನಾವರಿತುಕೊಳ್ಳಲು  
ದುಃಖವಿರಬೇಕು,ನಾವು ಮನುಷ್ಯರಾಗಿರಲು 

ಇಂದು ನೀ ದುಃಖದಲ್ಲಿದ್ದರೆ,ಚಿಂತಿಸಬೇಡ 
ಜೀವನದ ದಾರಿಯಲಿ,ನೆಮ್ಮದಿಯ ಸುಳಿವಿಲ್ಲದಿದ್ದರೆ,ಚಿಂತಿಸಬೇಡ 
ದುಃಖವಿರುವುದು,ಕಲಿಸಲು ನಿನಗೆ ಜೀವನದ ಕಲೆ 
ದುಃಖವಿರುವುದು, ತಿಳಿಸಲು ನಿನಗೆ ಸಂತೋಷದ ಬೆಲೆ 

--ಭಾವನಾ

ಇಪ್ಪತ್ತಾರನೇ ಹುಟ್ಟುಹಬ್ಬ


ಆಯಿತು ನನಗೆ ಇಪ್ಪತ್ತಾರು ವರುಷ,ಹೇಗೆ ಕಳೆದವೋ ಇಷ್ಟು ವರುಷ ?
ಚಿಕ್ಕಂದಿನಲ್ಲಿ ಹುಟ್ಟುಹಬ್ಬವೆಂದರೆ ಇರುತಿತ್ತು ಅದೇನೋ ಹರುಷ
ಈಗ ಹುಟ್ಟುಹಬ್ಬ ನೆನಪಿಸುವುದು ಕೇವಲ, ಹೆಚ್ಚಾಗುವ ವರುಷ

ಪ್ರತಿ ಹಬ್ಬ ಪೇರಿಸಿತು ಅದೆಷ್ಟೋ ಭಾವ,ಬೆಳೆದೆ,ಕಲಿತೆ, ನಾ ಅದೆಷ್ಟೋ ಹಾವಭಾವ
ಗರಿಗೆದರಿತು ಪ್ರೌಢತೆ,ಕ್ಷೀಣಿಸಿತು ಮುಗ್ಧತೆ 
ಯವ್ವನವು ಚಿತ್ರಿಸಿತು ಹಲವೆಂಟು ಕತೆ
ಭಾವಗಳು ಬೆಳೆದಂತೆ,ಹೆಚ್ಚಿತು ಭಾವ ಬೆಸೆವ ತವಕ 
ಭಾವಗಳ ಸ್ಪಂದನೆಗೆ ಭಾವಜೀವಿಗಳ ಹುಡುಕಾಟ 
ಅರ್ಥವಾಗದ ಭಾವಗಳಿಗೆ ಅರ್ಥ ಹುಡುಕುವ ಗೊಂದಲ
ನನ್ನನ್ನು ನನ್ನವರಿಗೆ ಅರ್ಥೆಸುವ ಯತ್ನದಲಿ ಕೆಲವೊಮ್ಮೆ  ಆದೆ ನಾ ವಿಫಲ

ಪ್ರತಿ ವರುಷ ಸೇರಿಸಿತು ಹೊಸತೊಂದು ಅನಭವ ,ಹೊಸತೊಂದು ಬಾಂಧವ್ಯ .
ಬಾಂಧವ್ಯ ದ ನಂಟಿನಲಿ ಶಾಶ್ವತವಾಗಲು ಮತ್ತೆ ಪ್ರಯತ್ನ 
ಹೀಗೆ ಭಾವುಕತೆಯ ಸುಳಿಯಲ್ಲಿ ತೇಲಿ ಹೋಯಿತು ಇಪ್ಪತ್ತಾರು ವರುಷ 

-ಭಾವನಾ   

ಹರುಷದಲ್ಲಿದ್ದಾಗ ಕವನವೊಂದು ಬರೆವ ಆಸೆ


ಹರುಷದಲ್ಲಿದ್ದಾಗ ಕವನವೊಂದು ಬರೆವ ಆಸೆ ನನಗೆ
ದುಃಖದಲ್ಲಿದ್ದಾಗ ಬರುವ   ಭಾವಗಳ ತೀವ್ರತೆ, ಬರದು ಸುತ್ತಮುತ್ತಲಿದ್ದಾಗ ನಗೆ
ಸಂತಸದ ಕ್ಷಣಗಳನು  ಪದಗಳಲ್ಲಿ ಹಿಡಿದಿಡಲು ಪಟ್ಟೆ ನಾ ಪ್ರಯತ್ನ ಬಹಳ
ಆದರೆ ಭಾವದ ಪದಗಳು ಹಾಳೆಯ ಮೇಲೆ ಉದುರಿದ್ದು ವಿರಳ

ದುಃಖದಲ್ಲಿದ್ದಾಗ ಹಾಳೆಯ ನಂಟು ಅಚ್ಚು ಮೆಚ್ಚು
ಈ ಮನಸ್ಸಿನ ವೇದನೆ ಹಾಳೆಯ ಬಿಟ್ಟು , ಇನ್ಯಾರಿಗೂ ತಿಳಿಯದು  ಹೆಚ್ಚು
ಹಾಳೆಯೊಡನೆ ವ್ಯಕ್ತ ಪಡಿಸಿದ ಅನಿಸಿಕೆಗಳು ನೂರೆಂಟು
ಖೇದ,ಈರ್ಷೆ,ಹಂಬಲ,ಬಯಕೆ,ಖಿನ್ನತೆ,ಕನಸು, ಇನ್ನು ಹಲವೆಂಟು

ಮನಸ್ಸಿಗೆ ಹೀಗೊಂದು  ಬಂದ ಆಲೋಚನೆ
ದುಃಖದಲ್ಲಿ ಮಾತ್ರ ಕವಿಯಾಗುವ ನಾನು
ಸಂತಸದಲ್ಲಿ ಯಾಕೆ ಕವಿಯಗಲಾರೆ ನಾನು ?
ಮನದಲ್ಲಿ ಹೀಗೊಂದು ಚಿಕ್ಕ ಆಸೆ
ಹರುಷದಲ್ಲಿದ್ದಾಗ ಕವನವೊಂದು ಬರೆವ ಆಸೆ